About Poland Kannadigaru
ಪೋಲೆಂಡ್ ಕನ್ನಡಿಗರು
ಪೋಲೆಂಡ್‌ನಲ್ಲಿ ನೆಲೆಸಿದ ಕನ್ನಡ ಸಮುದಾಯದ ರೋಚಕ ಪಯಣ ಗಮನಾರ್ಹವಾಗಿ ತನ್ನ ಪಾರಂಪರಿಕ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪೋಷಿಸಿಕೊಂಡು ಇಲ್ಲಿನ ನೆಲದ ಕಾನೂನು, ಸಂಪ್ರದಾಯಗಳನ್ನು ಗೌರವಿಸುತ್ತಾ, ಸ್ನೇಹ ಸಂವರ್ಧನೆಗಳೊಂದಿಗೆ ಮತ್ತು ಪ್ರೀತಿ, ಪ್ರೇಮ, ವಿಶ್ವಾಸಗಳಂತಹ ಸ್ನಿಗ್ಧ ಭಾವನೆಗಳನ್ನು ರೂಢಿಸಿಕೊಂಡು ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಸಮಾನ ಮನಸ್ಕರು ಒಟ್ಟಿಗೆ ಸೇರಿ ಚಿಂತನೆ ನಡೆಸಿದರೆ ಅದು ಸಾಧನೆಯ ಆರಂಭ. ಸಹಯೋಗ ಸಹಭಾಗಿತ್ವ ಮುಂದುವರೆಸಿದರೆ ಅದು ಪ್ರಗತಿ. ಕಾರ್ಯದಲ್ಲಿ ಒಗ್ಗಟ್ಟಿನಿಂದ ತೊಡಗಿಸಿಕೊಂಡರೆ ಅದು ಫಲಿತ ಯಶಸ್ಸು. ಭಾರತ ವಿವಿಧ ಭಾಷೆಗಳ, ಜನಾಂಗಗಳ, ಧರ್ಮಗಳ ನಾಡಾಗಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವಾಗಿದೆ. ಕರ್ನಾಟಕ ಸಹ ಸುದೀರ್ಥ ಇತಿಹಾಸ ಹೊಂದಿದ್ದು ಇಲ್ಲಿನ ಕವಿಗಳು, ಸಾಹಿತಿಗಳು, ಕಲಾವಿದರು, ಆಡಳಿತಗಾರರು, ವಿಜ್ಞಾನಿಗಳು, ಶ್ರಮಜೀವಿಗಳು, ಕ್ರೀಡಾ ಪ್ರತಿಭೆಗಳು ಸೇರಿ ವೈವಿಧ್ಯಮಯವಾಗಿ ಸಂಸ್ಕೃತಿಯನ್ನು ಪೋಷಿಸಿದ್ದಾರೆ. ಇವುಗಳನ್ನೇ ಬಳುವಳಿಯಾಗಿಸಿ ರಕ್ಷಿಸಿ ಇದನ್ನು ಇಲ್ಲಿಯ ಜನರಿಗೆ ಪರಿಚಯಿಸಿದ್ದೇವೆ.
ಒಂದು ಕೆಲಸದ ಆರಂಭಕ್ಕೆ ಮಾತ್ರ ಪ್ರೇರಣೆ ಬೇಕು. ಆದರೆ ನಮ್ಮಿಂದ ಅಂತಹ ಇನ್ನಷ್ಟು ಕೆಲಸಗಳು ಮುಂದುವರೆಯವುದಕ್ಕೆ ನಮ್ಮಲ್ಲಿ ಹವ್ಯಾಸ ಅಂತರ್ಗತವಾಗಿರಬೇಕು. ಇದನ್ನು ಕುರಿತುಕೊಂಡೇ ನಮ್ಮ ನೆಲ-ಜಲ- ಭಾಷೆ, ಸಂಪ್ರದಾಯ, ಪರಂಪರೆಗಳನ್ನು ನಮ್ಮ ಮುಂದಿನ ತಲೆಮಾರಿಗೂ ತಿಳಿಸುತ್ತಲೇ ಹೊರನಾಡಿನಲ್ಲಿಯೂ ಇದನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ 2014 ರಲ್ಲಿ ಕನ್ನಡ ಭಾಷಿಕರ ಅಲ್ಪಸಂಖ್ಯೆಯ ಮಿತ್ರರೊಂದಿಗೆ ಸಂಘ ಸ್ಥಾಪಿಸಲ್ಪಟ್ಟಿತು. ಪರಸ್ಪರ ಸ್ನೇಹ ಸಂವರ್ಧನೆಯ ಆಶಯದೊಂದಿಗೆ ಪ್ರಾರಂಭವಾದ ಸಂಸ್ಥೆ ಇಂದು ಅಭೂತಪೂರ್ವ ರೀತಿಯಲ್ಲಿ ಸಂಘಟಿತವಾಗಿದೆ. ಇಲ್ಲಿನ ನಗರಗಳಾದ Warsaw, Krakow, Wroclaw, Lublin, Lodz, Poznan ಹಾಗೂ Gdansk ಪ್ರದೇಶಗಳಿಂದ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಕ್ರಿಯ ಸದಸ್ಯತ್ವ ಹೊಂದಿದೆ. ಇದರಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಇಂಜಿನಿಯರ್‌ಗಳು, ಡಾಕ್ಟರರು, ವಾಣಿಜ್ಯೋದ್ಯಮಿಗಳು ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿನ ಜನರು ಸೇರಿದ್ದಾರೆ.
ಸಾಂದರ್ಭಿಕವಾಗಿ ಒಂದೆಡೆ ಸೇರುತ್ತಿದ್ದ ನಾವು ಇಂದು ನಿಯಮಿತವಾಗಿ ಸಂಸ್ಥೆಯಲ್ಲಿ ಪಾಲ್ಗೊಂಡು ರಚನಾತ್ಮಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದೇವೆ. ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳನ್ನು ವಾರ್ಷಿಕವಾಗಿ ಕನಿಷ್ಠ ನಾಲ್ಕು ಪ್ರಮುಖ ಸಂದರ್ಭಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವ, ಸಂಕ್ರಾಂತಿ, ಯುಗಾದಿ, ಈದ್, ಗಣೇಶ ಹಬ್ಬ, ದೀಪಾವಳಿ ಮತ್ತು ಕ್ರಿಸ್‌ಮಸ್ ನಂತಹ ಎಲ್ಲ ಮತ-ಪಂಥಗಳ ಆಚರಣೆಗಳು ನಮ್ಮ ಉದ್ದೇಶಿತ ಆಶಯಗಳನ್ನು ಪ್ರತಿಬಿಂಬಿಸುತ್ತವೆ. ತನ್ಮೂಲಕ, ಏಕತೆಯ ಸಂದೇಶ, ಶಾಂತಿ ಪಾಠಗಳ ಪುನರುತ್ಥಾನವಾಗುತ್ತದೆ. ಇದಲ್ಲದೇ ಸಂಸ್ಥೆ ಕ್ರೀಡಾಕೂಟ, ಸ್ಪರ್ಧಾತ್ಮಕ ಕಾರ್ಯಕ್ರಮ, ನೃತ್ಯ, ಸಂಗೀತ, ಕಲೆ, ಸಾಹಿತ್ಯಗಳಂತಹ ಸಾಮಾಜಿಕ ಕಾರ್ಯಗಳನ್ನು ಬೇಸಿಗೆಯ ಆಟಕೂಟದ ಮುಖಾಂತರ ಆಯೋಜಿಸುತ್ತದೆ.
ನಾವೆಲ್ಲ ಒಂದು ಎನ್ನುವ ಭಾವನೆಯಿಂದ ಸಾಂಪ್ರದಾಯಿಕ ಕನ್ನಡ ಕಲೆಗಳ ಕಮ್ಮಟ, ಕರ್ನಾಟಕ ವೈಭವದ ಸೆಮಿನಾರ್‌ಗಳನ್ನು, ಕಥೆ-ಕವನ, ಜಾನಪದ ಐತಿಹ್ಯಗಳನ್ನು ಜೀವಂತಗೊಳಿಸುವ ಕಾರ್ಯಕ್ರಮಗಳನ್ನು ಪೋಲೆಂಡ್‌ನ ಭಾರತೀಯ ಇತರ ಸಂಘ-ಸಂಸ್ಥೆಗಳ ಸಹಯೋಗ, ಸಹಕಾರಗಳೊಂದಿಗೆ ಸಂಯುಕ್ತವಾಗಿ ಆಚರಿಸುತ್ತೇವೆ. ಇದರಿಂದ ಪ್ರಾದೇಶಿಕ ಭಾವನೆಗಳ ಸಂಕುಚಿತತೆ ಇಲ್ಲವಾಗಿ ವಿಶಾಲ ಭ್ರಾತೃತ್ವದ ಬೆಸುಗೆ ಇಮ್ಮಡಿಯಾಗುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ ಶಿಕ್ಷಣ, ಆರೋಗ್ಯ, ನೆರವಿಗಾಗಿ ಸದಾ ಸಂಸ್ಥೆ ಸನ್ನದ್ಧವಾಗಿರುವುದಾಗಿ “ಮುಸ್ಷಂಜೆ ಮಾತು” ಎಂಬ ಮಾಸಿಕ ಕಾರ್ಯಕ್ರಮದ ಮೂಲಕ ವಿಚಾರ ವಿನಿಮಯ, ಪ್ರತಿಭಾ ಅನಾವರಣ, ಸುಪ್ತವಾಗಿ ಅಡಗಿದ ಪ್ರತಿಭೆಗಳಿಗೆ ಅವಕಾಶ ಒದಗಿಸಿ ಜ್ಞಾನ ಪ್ರಸಾರ ಮಾಡುತ್ತದೆ. ಚಲನಚಿತ್ರಗಳ ಪ್ರದರ್ಶನ ಕೇವಲ ಮನರಂಜನೆಗಾಗಿ ಸೀಮಿತಗೊಳಿಸದೇ ಸಂಸ್ಥೆಯನ್ನು ಸಶಕ್ತಗೊಳಿಸುವ ಸದಸ್ಯರಲ್ಲಿ ಹುಮ್ಮಸ್ಸು ನೀಡುವ ಉದ್ದೇಶ ಹೊಂದಿರುವದು. ಪೋಲೆಂಡ್‌ಗೆ ಪ್ರಧಾನಿ ಮೋದಿಜಿ ಐತಿಹಾಸಿಕವಾಗಿ ಭೇಟಿ ನೀಡಿದಾಗ ಭಾರತೀಯತೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಅಭೂತಪೂರ್ವ ಸ್ವಾಗತ ನೀಡಿ ಗೌರವಿಸುವ ಸ್ತುತ್ಯಕಾರ್ಯ ಸಂಸ್ಥೆ ನೆರವೇರಿಸಿದೆ.
ಉಕ್ರೇನ್‌ನಲ್ಲಿ ಯುದ್ಧದ ಛಾಯೆ ಆವರಿಸಿ ಬದುಕು ಅತಂತ್ರವಾದಾಗ ಮಾನವೀಯತೆಯ ದೃಷ್ಟಿಯಿಂದ ಅಲ್ಲಿನ ಬಾಧಿತ ಪ್ರದೇಶಗಳಲ್ಲಿನ ಭಾರತೀಯರಿಗೆ ಆಪರೇಶನ್ ಗಂಗಾ ಹೆಸರಿನಲ್ಲಿ ಸಹಾಯ ಹಸ್ತ ಚಾಚಿ ಅನ್ನ-ಆಶಯ, ಸಾರಿಗೆ ವ್ಯವಸ್ಥೆ ಕಲ್ಪಿಸಿ, ಹಣ ಸಹಾಯ ಮಾಡಿ ಧೈರ್ಯ ತುಂಬಿದ್ದೇವೆ. ಮಹಾಮಾರಿ ಕರೋನಾ ವಿಶ್ವವ್ಯಾಪಿಯಾಗಿ ಪಸರಿಸಿ ತಲ್ಲಣ ಸೃಷ್ಟಿಸಿದಾಗ ಆನ್‌ಲೈನ್‌ನಲ್ಲಿಯೇ ಸಂಘಟಿತವಾಗಿ, ವೈದ್ಯಕೀಯ ಕಿಟ್ ಹಂಚುವ ಮೂಲಕ ಜನರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಆರೋಗ್ಯ ತುರ್ತು ಸಂದರ್ಭ (Health Emergency), ಅಗತ್ಯ ವಸ್ತುಗಳ ಅಭಾವ ಆಗದಂತೆ ಕ್ರಮ ಕೈಗೊಳ್ಳಲಾಯಿತು. ಸಮುದಾಯದ ಸದಸ್ಯರು ಎಂತಹದೇ ಸಂಕಷ್ಟಕ್ಕೆ ಸಿಲುಕಿರಲಿ, ಆಗ ಅವರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಪ್ರಜ್ಞೆ ಮೆರೆಯಲಾಗಿದೆ. ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಪೋಲೆಂಡ್‌ಗೆ ಬಂದಾಗ ಸಂಸ್ಥೆಯು ಅವರಿಗೆ ಆಶ್ರಯ ಕಲ್ಪಿಸಿದ್ದಲ್ಲದೇ ಹಣದ ಸಹಾಯ ಸಹ ಮಾಡಲಾಯಿತು. ಕೆಲ ಸಂದರ್ಭಗಳಲ್ಲಿ ಸಂಸ್ಥೆಯ ಸದಸ್ಯರು ಉದ್ಯೋಗದಿಂದ ವಂಚಿತರಾದಾಗ ಅನ್ನ-ಆಶ್ರಯ ನೀಡಿ ಧೈರ್ಯ ನೀಡಲಾಯಿತು. ಇಲ್ಲಿ ಮೃತ ವ್ಯಕ್ತಿಗಳಿಗೆ ಸೇರಿದ ವಸ್ತುಗಳನ್ನು ಅವರ ಕುಟುಂಬಗಳಿಗೆ ಮರಳಿಸುವಾಗ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ, ಮೃತ ವ್ಯಕ್ತಿಗಳ ವಸ್ತುಗಳನ್ನು ಅವರ ಕುಟುಂಬಗಳಿಗೆ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದರು. ಭಾರತೀಯರು ಯಾವುದೇ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಸದಸ್ಯರು ಉದಾರ ಮನೋಭಾವದಿಂದ ಧನ ಸಹಾಯ ಮಾಡಿದ್ದಲ್ಲದೇ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿ ಏಕತೆ ಪ್ರದರ್ಶಿಸಲಾಗಿದೆ.
“ಹೋಗು ದೂರದ ನಾಡಿಗೆ, ನಿನ್ನ ಭಾಷೆ, ನಿನ್ನ ನೆಲೆ ಮರೆಯದಿರು, ಕನ್ನಡದ ಬೆಳಕು ಹೃದಯದಲ್ಲಿ ಸದಾ ಹೊಮ್ಮಲಿ!”— ಕುವೆಂಪು
Our Mission
Our mission is to preserve and promote Karnataka's rich cultural heritage while fostering unity and support among the Kannada-speaking diaspora in Poland. We aim to empower our members through cultural events, social programs, and mutual assistance, while also sharing and celebrating our traditions with the broader Polish and international communities to promote cultural understanding and exchange.


Our Vision
We envision a vibrant, connected community where Kannada-speaking individuals in Poland thrive together, maintaining their cultural roots while integrating seamlessly into their new environment. Through cultural exchange, mutual support, and community service, we aim to build a harmonious and inclusive society, where our rich heritage is shared with both the local and international populations to foster mutual respect and understanding.
Connect with us to publish an article of your choice as a PK member.